ರಾಗ : ಮೋಹನ   
ತಾಳ: ಆದಿ  
 
ವಂದಿಪೆ ನಮ್ಮ ಮುದ್ದು ಶಾರದೆ ಶರ  
ಶ್ಚಂದಿರ ವದನೆ ಶಾರದೆ    || ಪ  || 
 

ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ 
ಕುಂದು ನೋಡದೆ ಶ್ರುತಿವಂದೆ ಜ್ಞಾನವ ನೀಡೆ  || ಅನು ಪಲ್ಲವಿ  || 
 

ಸಿತಾಬ್ಜಾಸನೆ ಸುಖದಾಯಕಿ ಸುರ 
ನಾಥಾರಾಧಿತೆ ವಿಶ್ವನಾಯಕಿ 
ವೀತದುರಿತೆ ಶಿವಮಾತೆ ಸದ್ಗುಣಮಣಿ  
ವ್ರಾತೆ ವೇದೋಪನಿಷದ್ಗೀತೆ ವಾಗ್ದೇವಿ ಮಾತೆ   || ೧  || 
 
ಕೋಕಿಲವಾಣಿ ಕವಿಸೇವಿತೆ ಎನ್ನ
ವಾಕು ಲಾಲಿಸೆ ಮುನಿವಂದಿತೆ
ತೋಕನೆಂದು ಸುವಿವೇಕ ಬುದ್ಧಿಯನಿತ್ತು
ಸಾಕು ಸಜ್ಜನರನ್ನು ವಾಕು ಮನ್ನಿಸು ತಾಯೆ  || ೨ ||

ಪಾತಕಿಗಳೊಡನಾಡಿ ನಾ ನಿನ್ನ 
ಪೋತಾಬ್ಜಪದ ಭಜಿಸಧ್ಹೋದೆ ನಾ 
ಪಾತಕವೆಣಿಸದೆ ಸೀತಾರಮಣ ಜಗ 
ನ್ನಾಥ ವಿಠ್ಠಲನಂಘ್ರಿ ಗೀತಾಮೃತವನುಣಿಸು  || ೩  ||